ಬಿಳಿಗಿರಿರಂಗನ ಬೆಟ್ಟ	
ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಯಳಂದೂರು ತಾಲ್ಲೂಕಿನ ಆಗ್ನೇಯಕ್ಕೆ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿ ಇರುವ ಬೆಟ್ಟ.  ಸಮುದ್ರಮಟ್ಟದಿಂದ ಸುಮಾರು 1552 ಮೀಟರ್ ಎತ್ತರವಿದೆ.  ಈ ಬೆಟ್ಟವನ್ನು ಬಿಳಿಗಿರಿ ಬೆಟ್ಟ, ಬಿಳಿಕಲ್ಲ ಬೆಟ್ಟ, ಶ್ವೇತಾದ್ರಿ ಎಂದೂ ಕರೆಯುತ್ತಾರೆ.  ಬೆಟ್ಟದ ಮೇಲೆ ಬಿಳಿಗಿರಿರಂಗಸ್ವಾಮಿ ದೇವಾಲಯವಿದ್ದು ಪುಣ್ಯಕ್ಷೇತ್ರವೆನಿಸಿದೆ.
ಬೆಟ್ಟ ಏರಲು ಯಳಂದೂರು ಕಡೆಯಿಂದ ಕಣಿವೆಯ ಎರಡು ರಸ್ತೆಗಳಿವೆ.  ಇವುಗಳ ಪೈಕಿ ಒಂದು ತೀರ ಕಡಿದು.  ಇನ್ನೊಂದು ವಾಹನಸಂಚಾರಕ್ಕೆ ಅನುಕೂಲವಾಗಿದೆ.  ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ದಟ್ಟ ಕಾಡಿದೆ.  ಇಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೀಟೆ, ಬನ್ನಿ ಮೊದಲಾದ ಅಮೂಲ್ಯ ಮರಗಳಿವೆ.  ಕಾಡಿನಲ್ಲಿ ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ವಿವಿಧ ರೀತಿಯ ಜಿಂಕೆ ಮೊದಲಾದ ಪ್ರಾಣಿಗಳಿವೆ.  ಬೆಟ್ಟದ ಸುತ್ತಮುತ್ತಣ ಪ್ರದೇಶಗಳಲ್ಲಿ ಆನೆಯ ಹಾವಳಿಯುಂಟು.  ಇಲ್ಲಿಯ ಹವೆ ಹಿತಕಾರಿ.  ಬೆಟ್ಟದ ಮೇಲಿನಿಂದ ಕಾಣುವ ನಿಸರ್ಗ ದೃಶ್ಯ ರಮಣೀಯ.

ಇಲ್ಲಿ ವಾಸಿಸುವವರು ಹೆಚ್ಚಾಗಿ ಸೋಲಿಗರು.  ಬೆಟ್ಟದ ಮೇಲೆ ಕೆಲವೆಡೆ ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯುವ ಸಣ್ಣ ತೋಟಗಳಿವೆ.  ಬೆಟ್ಟದ ಮೇಲೆ ಕರ್ನಾಟಕ ಸರ್ಕಾರದ ರೇಷ್ಮೆ ಸಂಶೋಧನಾ ಕೇಂದ್ರವಿದೆ.  ಇಲ್ಲಿಯ ಪ್ರವಾಸಿ ಬಂಗಲೆಯ ಸುತ್ತಲೂ ಸಂಕೋನ ಮರಗಳಿವೆ.

ದೇವಾಲಯದ ಪ್ರಾಕಾರ ನವರಂಗ ಹಾಗೂ ಮುಖಮಂಟಪ ಮೊದಲಾದವು ಸಾಮಾನ್ಯ ರೀತಿಯ ದ್ರಾವಿಡಶೈಲಿಯ ಕಟ್ಟಡ.  ಮುಖ್ಯ ದೇವರು ಬಿಳಿಗಿರಿ ರಂಗಸ್ವಾಮಿ (ಶ್ರೀನಿವಾಸ) ನವರಂಗದ ಬಲಭಾಗದ ಮೂರು ಗೂಡುಗಳಲ್ಲಿ ಲೋಹ ನಿರ್ಮಿತ ಬಿಳಿಗಿರಿರಂಗ, ಹನುಮಂತ ಮಣವಾಳ ಮಹಾಮುನಿಗಳ ಮೂರ್ತಿಗಳಿವೆ.  ಬಲ ಭಾಗದಲ್ಲಿ ಅಲರ್‍ಮೇಲು ಮಂಗೈ ಅಮ್ಮನವರ ಸನ್ನಿಧಿ ಇದೆ.  ನವರಂಗದ ಎಡಭಾಗದ ಗೂಡುಗಳಲ್ಲಿ ನಮ್ಮಾಳ್ವಾರ್ ಮತ್ತು ರಾಮಾನುಜರ ವಿಗ್ರಹಗಳಿವೆ.  ದ್ವಾರದ ಬಲಗಡೆಯಲ್ಲಿರುವ ಇನ್ನೊಂದು ಗೂಡಿನಲ್ಲಿ ವೇದಾಂತಚಾರ್ಯರ ವಿಗ್ರಹ ಕಾಣಬಹುದು.

ಇಲ್ಲಿಯ ಮೂಲದೇವರನ್ನು ವಸಿಷ್ಠರು ಪ್ರತಿಷ್ಠಾಪಿಸಿದರು ಎಂಬುದು ಇಲ್ಲಿಯ ಸ್ಥಳಪುರಾಣ.  ಇಲ್ಲಿಯ ಬಿಳಿಕಲ್ಲು ತಿರುವೇಂಕಟನಾಥನಿಗೆ ಹದಿನಾಡಿನ ಮುದ್ದರಾಜ 1667ರಲ್ಲಿ ದತ್ತಿ ಬಿಟ್ಟ ವಿಷಯವನ್ನು ಇಲ್ಲಿರುವ ತಾಮ್ರಶಾಸನ ತಿಳಿಸುತ್ತದೆ.  ದಿವಾನ್ ಪೂರ್ಣಯ್ಯ ಈ ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನು ದತ್ತಿಯಾಗಿ ಬಿಟ್ಟ. ಬ್ರಹ್ಮಾಂಡಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಕರೆಯಲಾಗಿದೆ.  ಪ್ರತಿ ವರ್ಷ ವೈಶಾಖ ಮಾಸದಲ್ಲಿ (ಏಪ್ರಿಲ್) ರಥೋತ್ಸವ ನಡೆಯುವುದು.

ದೇವಾಸ್ಥಾನದಿಂದ ಸುಮಾರು 16 ಕಿಮೀ ದೂರದಲ್ಲಿ ಭಾರ್ಗವೀ ನದಿ ಹರಿಯುತ್ತದೆ.  ಪರಶುರಾಮ ಮಾತೃಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸು ಆಚರಿಸಿ ವಿರಜಾ ನದಿಯ ನೀರಿನಿಂದ ಭಗವಂತನ ಪಾದ ತೊಳೆದುದರಿಂದ ಆ ನೀರಿನಿಂದಲೇ ಒಂದು ಪುಣ್ಯನದಿ, ಉದ್ಭವಿಸಿತೆಂದೂ ಇದನ್ನೇ ಭಾರ್ಗವೀ ಎಂದು ಕರೆಯಲಾಯಿತೆಂದೂ ಐತಿಹ್ಯ.  ಬೆಟ್ಟದ ಮೇಲೆ ಗಂಗಾಧರೇಶ್ವರನ ಗುಡಿ ಇದೆ.  ಭಸ್ಮಾಸುರನಿಗೆ ವರದಾನ ಮಾಡಿ, ಅವನಿಂದಲೇ ವಂಚಿತನಾದ ರುದ್ರದೇವನ ರಕ್ಷಣೆಗಾಗಿ ಶ್ವೇತಾದ್ರೀಶ ಮೋಹಿನಿ ರೂಪ ತಾಳಿ ಅಸುರನನ್ನು ಭಸ್ಮೀಭೂತನಾಗಿ ಮಾಡಿದನೆಂದೂ ಅನಂತರ ರುದ್ರದೇವ ಗಂಗಾಧರನೆಂಬ ಹೆಸರಿನಿಂದ ಈ ಸ್ಥಳದಲ್ಲೇ ನೆಲಸಿದನೆಂದೂ ಪ್ರತೀತಿ.

ಬಿಳಿಗಿರಿರಂಗಸ್ವಾಮಿಯ ದೇವಸ್ಥಾನದಿಂದ ಸುಮಾರು 19 ಕಿಮೀ ದೂರದಲ್ಲಿ ಶಿವಸಮುದ್ರದ ಗಂಗರಾಜ ತನ್ನ ಅಳಿಯನಾಗಿ ಕುಂಚುಕೋಟೆಯನ್ನು ನಿರ್ಮಿಸಿದುದಾಗಿ ತಿಳಿಯುತ್ತದೆ.  ಈಗಲೂ ಆ ಕೋಟೆಯ ಅವಶೇಷಗಳನ್ನು ನೋಡಬಹುದಾಗಿದೆ. ಬೆಟ್ಟದ ಬುಡದಲ್ಲಿ ಬೃಂದಾವನವೆಂಬ ತುಳಸಮ್ಮನ ಗುಡಿ ಇದೆ.  ಮಧ್ಯಭಾಗದಲ್ಲಿ ಕನಕದಾಸರದೆಂದು ಹೇಳಲಾಗುವ ಗುಹೆ ಇದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ